ಕಾಳಗಮೀನು ಮಲಯ, ಸಯಾಂ, ಥೈಲ್ಯಾಂಡ್ ಮತ್ತಿತರ ಆಗ್ನೇಯ ಏಷ್ಯದ ದೇಶಗಳ ಸಿಹಿನೀರಿನ ಕೊಳಗಳಲ್ಲಿ ವಾಸಿಸುವ ಒಂದು ಬಗೆಯ ಮೀನು (ಫೈಟಿಂಗ್ ಫಿಶ್). ಭಯಂಕರವಾಗಿ ಹೋರಾಡುವ ಗಂಡುಮೀನಿನ ಅಸಾಮಾನ್ಯ ಗುಣವೇ ಇದರ ಹೆಸರಿಗೆ ಕಾರಣ. ಇದರ ವೈಜ್ಞಾನಿಕ ನಾಮ ಬೆಟ ಸ್ಪ್ಲೆಂಡೆನ್ಸ್.
ಪೂರ್ಣ ಬೆಳೆದ ಗಂಡು ಮೀನು ಸುಮಾರು 2"-3" ಉದ್ದ ಇದೆ. ಬಲು ಉದ್ದವಾದ ಅಗಲವಾದ ಥಳಥಳಿಸುವ ಕೆಂಪು, ನೀಲಿ, ಹಸಿರು ಮುಂತಾಗಿ ವರ್ಣರಂಜಿತವಾಗಿರುವ ಈಜುರೆಕ್ಕೆಗಳಿರುವುದರಿಂದ ಸುಂದರವಾಗಿ ಕಾಣುತ್ತದೆ. ಹೆಣ್ಣುಮೀನು ಗಂಡಿನಷ್ಟು ಆಕರ್ಷಕವಾಗಿಲ್ಲ. ಕೀಟಗಳ ಡಿಂಭಗಳೇ ಇವುಗಳ ಆಹಾರ.
ಈ ಮೀನಿನ ಗೂಡು ಕಟ್ಟುವ ವಿಧಾನ ಮತ್ತು ಮರಿಗಳ ಪಾಲನೆಯ ಕ್ರಮ ಬಲು ವಿಚಿತ್ರವಾದುವು. ಗೂಡು ಕಟ್ಟುವ ಕಾರ್ಯ ಗಂಡಿನದು. ಈ ಕಾರ್ಯದಲ್ಲಿ ಬಹಳ ಆಸಕ್ತಿ ತೋರಿಸುವ ಗಂಡು ಮೀನು ನೀರಿನ ಮೇಲ್ಮಟ್ಟಕ್ಕೆ ಬಂದು ಗಾಳಿಯನ್ನು ಹೀರಿಕೊಂಡು ತನ್ನ ಮೊದಲಿನ ಜಾಗಕ್ಕೆ ತೆರಳುತ್ತದೆ. ಅಲ್ಲಿಂದ ಬಾಯಲ್ಲಿನ ಗಾಳಿಯನ್ನು ಸಣ್ಣ ಸಣ್ಣ ಗುಳ್ಳೆಗಳಾಗಿ ಹೊರಬಿಡುತ್ತದೆ. ಪ್ರತಿಗುಳ್ಳೆಯೂ ಒಂದು ವಿಶೇಷ ಬಗೆಯ ಗಟ್ಟಿಲೋಳೆಯಿಂದ ಆವೃತವಾಗಿರುವುದರಿಂದ ಗುಳ್ಳೆಗಳು ಒಡೆಯದೆ ಒಂದಕ್ಕೊಂದು ಅಂಟಿಕೊಳ್ಳುತ್ತವೆ. ಹೀಗೆ ಅಂಟಿಕೊಂಡ ಗುಳ್ಳೆಗಳು ನೀರಿನ ಮಟ್ಟಕ್ಕೆ ಬಂದು ಒಟ್ಟಾಗಿ ಗೂಡಿನಂತೆ ತೇಲತೊಡಗುತ್ತವೆ. ಅನಂತರ ಗಂಡು ಮೀನು ಪ್ರೌಢ ವಯಸ್ಸಿನ ಹೆಣ್ಣುಮೀನಿನ ಬೇಟಕ್ಕೆ ಸಿದ್ಧವಾಗುತ್ತದೆ. ಅಂಥ ಮೀನೊಂದು ಸಿಕ್ಕಾಗ ಅದನ್ನು ಬೆನ್ನಟ್ಟಿ ಬಲವಾಗಿ ಅಪ್ಪಿಕೊಳ್ಳುವುದರ ಮೂಲಕ ಹೆಣ್ಣು ಮೊಟ್ಟೆಯಿಡುವಂತೆ ಬಲಾತ್ಕರಿಸುತ್ತದೆ. ಮೊಟ್ಟೆಗಳು ಹೊರ ಬರುತ್ತಿದ್ದಂತೆಯೇ ಅವುಗಳನ್ನು ನಿಶೇಚನಗೊಳಿಸುತ್ತದೆ. ಮೊಟ್ಟೆಗಳು ಭಾರವಾಗಿರುವುದರಿಂದ ನಿಧಾನವಾಗಿ ನೀರಿನ ತಳಕ್ಕಿಳಿಯುತ್ತವೆ. ಆಗ ಗಂಡು ಮೀನು ಹೆಣ್ಣನ್ನು ಅಲ್ಲಿಂದ ಓಡಿಸಿ ನೀರಿನ ತಳಕ್ಕಿಳಿದು ತನ್ನ ಬಾಯಲ್ಲಿ ಮೊಟ್ಟೆಗಳನ್ನು ಹಿಡಿದುಕೊಂಡು ಮೇಲಕ್ಕೆ ಬಂದು ಗೂಡಿನೊಳಕ್ಕೆ ಸೇರಿಸುತ್ತದೆ. ಈ ರೀತಿ ಹಲವಾರು ಬಾರಿ ಮಾಡಿ ಎಲ್ಲ ಮೊಟ್ಟೆಗಳನ್ನು ಗೂಡಿಗೆ ಸಾಗಿಸಿ ಅದರ ಬಳಿ ಕಾವಲು ನಿಲ್ಲುತ್ತದೆ. ಗೂಡಿನ ಗುಳ್ಳೆಗಳು ಅಕಸ್ಮಾತ್ತಾಗಿ ಒಡೆದರೆ ಬೇರೆ ಗುಳ್ಳೆಗಳನ್ನು ಸೇರಿಸುವುದು, ಮೊಟ್ಟೆಗಳು ಕೆಳಗೆ ಬೀಳುವಂತಾದರೆ ಅವನ್ನು ಮತ್ತೆ ಸ್ವಸ್ಥಾನಕ್ಕೆ ಸೇರಿಸುವುದು, ಬೇರೆ ಮೀನುಗಳು ಬಂದರೆ, ಮೊಟ್ಟೆಯಿಟ್ಟ ಹೆಣ್ಣುಮೀನೇ ಬಂದರೂ ಓಡಿಸುವುದು-ಮುಂತಾದ ಕೆಲಸಗಳನ್ನು ಕಾವಲಿರುವ ಗಂಡುಮೀನು ನಡೆಸುತ್ತದೆ. ಹೀಗೆ ಮೊಟ್ಟೆಗಳೊಡೆದು ಮರಿಗಳಾಗುವವರೆಗೂ ಅವನ್ನು ಕಾಪಾಡುತ್ತದೆ. ಬಹಳ ಆದರದಿಂದ ಸಹನೆಯಿಂದ ಮರಿಗಳನ್ನು ನೋಡಿಕೊಳ್ಳುವುದಾದರೂ ಅಪೂರ್ವವಾಗಿ ಕೆಲವು ಮರಿಗಳನ್ನು ಕಬಳಿಸುವುದೂ ಉಂಟು. ಕೆಲವೊಮ್ಮೆ ಹೆಣ್ಣು ಮೀನೊಂದು ಗೂಡಿನ ಹತ್ತಿರ ಬಂದು ಗಂಡನ್ನು ಓಡಿಸಿ ತಾನೇ ಕಾವಲಿಗೆ ನಿಲ್ಲುವುದುಂಟು.
ಕಾಳಗಮೀನಿನ ಗಂಡುಗಳು ಬಲು ಜಗಳಗಂಟಿಗಳೆಂದೂ ಹೆಸರಾಗಿವೆ. ಗಂಡುಗಳು ಪರಸ್ಪರ ಸಮೀಪಿಸಿದಾಗ ಬಹಳ ಉದ್ರೇಕಗೊಂಡು ಕ್ರೂರವಾಗಿ ಹೋರಾಡತೊಡಗುತ್ತವೆ. ತಮ್ಮ ಚೂಪಾದ ಹಲ್ಲುಗಳಿಂದ ಒಂದನ್ನೊಂದು ಕಚ್ಚಿ ಈಜುರೆಕ್ಕೆಗಳನ್ನು ಹುರುಪೆಗಳನ್ನು ಕಿತ್ತು ಹರಿದು ಉಗ್ರವಾಗಿ ಜಗಳವಾಡುತ್ತವೆ. ಈ ಗುಣವನ್ನು ಕಂಡೇ ಸಯಾಮಿನ ಜನ ಇವುಗಳ ನಡುವೆ ಮನರಂಜನೆಗಾಗಿ ಕಾಳಗ ಸ್ಪರ್ಧೆಗಳನ್ನೇರ್ಪಡಿಸುತ್ತಾರೆ. ಇದಕ್ಕಾಗಿಯೇ ವಿಶೇಷ ತಳಿಗಳನ್ನು ಎಬ್ಬಿಸಿರುವುದೂ ಉಂಟು. ಹುಂಜದ ಕಾಳಗದಲ್ಲಿನಂತೆ ಜೂಜುಕಟ್ಟಿ ಮೀನಿನ ಸ್ಪರ್ಧೆ ನಡೆಸುವುದು ಥೈಲೆಂಡ್, ಸಯಾಂ ಪ್ರದೇಶಗಳಲ್ಲಿ ಬಹಳ ಸಾಮಾನ್ಯ
ಕಾಳಗಮೀನು ಮಲಯ, ಸಯಾಂ, ಥೈಲ್ಯಾಂಡ್ ಮತ್ತಿತರ ಆಗ್ನೇಯ ಏಷ್ಯದ ದೇಶಗಳ ಸಿಹಿನೀರಿನ ಕೊಳಗಳಲ್ಲಿ ವಾಸಿಸುವ ಒಂದು ಬಗೆಯ ಮೀನು (ಫೈಟಿಂಗ್ ಫಿಶ್). ಭಯಂಕರವಾಗಿ ಹೋರಾಡುವ ಗಂಡುಮೀನಿನ ಅಸಾಮಾನ್ಯ ಗುಣವೇ ಇದರ ಹೆಸರಿಗೆ ಕಾರಣ. ಇದರ ವೈಜ್ಞಾನಿಕ ನಾಮ ಬೆಟ ಸ್ಪ್ಲೆಂಡೆನ್ಸ್.